ಆಂಧ್ರ ಪ್ರದೇಶ
ಭಾರತದ ಒಂದು ರಾಜ್ಯ. ದಕ್ಷಿಣದಿಂದ ಮಧ್ಯಭಾರತವನ್ನು ಮುಟ್ಟುವಂತಿರುವ ಈ ರಾಜ್ಯ ಭಾರತದ 965 ಕಿ.ಮೀ. ಪೂರ್ವ ತೀರವನ್ನೊಳಗೊಂಡಿದೆ. ಉ.ಅಕ್ಷಾಂಶ 77° - 85° , ಪೂರ್ವರೇಖಾಂಶ 12° -19° ಯವರೆಗೆ ಹರಡಿರುವ ಈ ರಾಜ್ಯವನ್ನು ಉತ್ತರದಲ್ಲಿ ಒರಿಸ್ಸ, ಚತ್ತೀಸ್‍ಘರ್ ಮತ್ತು ಮಹಾರಾಷ್ಟ್ರ ರಾಜ್ಯಗಳೂ ದಕ್ಷಿಣದಲ್ಲಿ ಕರ್ನಾಟಕ, ತಮಿಳುನಾಡು ರಾಜ್ಯಗಳೂ ಪೂರ್ವದಲ್ಲಿ ಬಂಗಾಳಕೊಲ್ಲಿಯೂ ಪಶ್ಚಿಮದಲ್ಲಿ ಕರ್ನಾಟಕ ರಾಜ್ಯ ಸುತ್ತುವರೆದಿವೆ. 23 ಜಿಲ್ಲೆಗಳನ್ನು 210 ನಗರ ಪಟ್ಟಣಗಳನ್ನೂ 28,123 ಗ್ರಾಮಗಳನ್ನೊಳಗೊಂಡ ಈ ರಾಜ್ಯದ ಒಟ್ಟು ವಿಸ್ತೀರ್ಣ 2,75,069 ಚ.ಕಿ.ಮೀಗಳು ಜನಸಂಖ್ಯೆ 7,61,11,243 (2001) ರಾಜಧಾನಿ ಹೈದರಾಬಾದ್.

ಮೇಲ್ಮೈ ಲಕ್ಷಣಗಳು : ದಕ್ಷಿಣ ಭಾರತದಲ್ಲಿ ದಖನ್ ಪ್ರಸ್ಥಭೂಮಿಯ ಉತ್ತರ ಪ್ರದೇಶವನ್ನೊಳಗೊಂಡಿರುವ ಈ ರಾಜ್ಯವನ್ನು ಮೂರು ಭಾಗವಾಗಿ ವಿಂಗಡಿಸಬಹುದು. 1 ದಖನ್ ಪ್ರಸ್ಥಭೂಮಿ: ಮಧ್ಯಭಾಗವನ್ನೊಳಗೊಂಡಿದೆ. ಇದನ್ನು ತೆಲಂಗಾಣ ಪ್ರಸ್ಥಭೂಮಿ ಎನ್ನುತ್ತಾರೆ. ಇದು ದಕ್ಷಿಣದಲ್ಲಿ ಚಿತ್ತೂರಿನಿಂದ ಉತ್ತರದಲ್ಲಿ ಅದಿಲಾಬಾದ್‍ವರೆಗೆ ಹಬ್ಬಿದೆ. ದಕ್ಷಿಣಭಾಗದಲ್ಲಿ ಕಿರಿದಾಗಿದ್ದು ಉತ್ತರಕ್ಕೆ ಹೋದಂತೆಲ್ಲ ಅಗಲವಾಗುತ್ತದೆ. 2 ಪೂರ್ವಘಟ್ಟಗಳ ಪ್ರದೇಶ : ಇದು ದಕ್ಷಿಣದಲ್ಲಿ ಶೇಷಾಚಲ (ತಿರುಪತಿ) ಮತ್ತು ಪಾಲ್‍ಕೊಂಡ ಬೆಟ್ಟಗಳಿಂದ ಉತ್ತರದಲ್ಲಿ ಶ್ರೀಕಾಕುಳಂ ಜಿಲ್ಲೆಯ ಉತ್ತರಭಾಗದವರೆಗೆ ಹಬ್ಬಿದೆ. ನಲ್ಲಮಲ ಎಂಬ ಹೆಸರಿನ ಈ ಪೂರ್ವ ಘಟ್ಟಗಳು 430 ಕಿ.ಮೀ. ಉದ್ದವಾಗಿ ಸರಾಸರಿ 30 ಕಿ.ಮೀ. ಅಗಲವಾಗಿವೆ. ಇವು ಸಾಧಾರಣವಾಗಿ 900 ರಿಂದ 1,100 ಕಿ.ಮೀ. ಎತ್ತರವಾಗಿವೆ. ಈ ಘಟ್ಟಗಳು ದಕ್ಷಿಣದಲ್ಲಿ ನೆಲ್ಲೂರು, ಗುಂಟೂರು ಜಿಲ್ಲೆಗಳಲ್ಲಿ ಒಂದೇ ಸಮನಾಗಿ ಹಬ್ಬಿವೆ. ಉತ್ತರದ ಕಡೆ ಹೋದಂತೆಲ್ಲ ಅಲ್ಲಲ್ಲಿ ಒಡೆದು ಹೋಗಿ ನದಿಗಳ ಪಾತ್ರಕ್ಕೆ ಅವಕಾಶ ಮಾಡಿಕೊಟ್ಟಿವೆ. ದಕ್ಷಿಣದಲ್ಲಿ ಪೆನ್ನಾರ್ ನದಿ ಮಧ್ಯಭಾಗದಲ್ಲಿ ಕೃಷ್ಣಾ ಮತ್ತು ಗೋದಾವರಿ ನದಿಗಳ ಪರ್ವತ ಪಂಕ್ತಿಗಳನ್ನು ಒಡೆದು ಪೂರ್ವಾಭಿಮುಖವಾಗಿ ಹರಿಯುತ್ತದೆ. 3 ಪೂರ್ವತೀರ ಪ್ರದೇಶ : ಪೂರ್ವ ಘಟ್ಟಗಳು ಮತ್ತು ಬಂಗಾಳಕೊಲ್ಲಿಯ ತೀರದ ನಡುವೆ ಸಮುದ್ರ ತೀರ ಮೈದಾನವಿದೆ. ಇದು 100 ರಿಂದ 150 ಕಿ.ಮೀ. ಅಗಲವಾಗಿದೆ. ಗೋದಾವರಿ ಈ ತೀರ ಮೈದಾನದಲ್ಲಿ ಎರಡು ಕವಲಾಗಿ ಹರಿದು ಗೌತಮೀ ಗೋದಾವರಿ, ವಸಿಷ್ಠ ಗೋದಾವರಿ ಎಂದು ಹೆಸರು ಪಡೆದು ಏಳು ಪ್ರವಾಹಗಳಾಗಿ ಸಮುದ್ರವನ್ನು ಸೇರುವ ಸ್ವಲ್ಪ ಮುನ್ನ ಮೂರು ಉಪ ಪ್ರವಾಹಗಳಾಗಿ ಹರಿಯುತ್ತದೆ. ಗೋದಾವರಿ ಮತ್ತು ಕೃಷ್ಣಾ ನದಿಗಳ ಮುಖಜ ಭೂಮಿಯಲ್ಲಿ ನೂರಾರು ನೀರಾವರಿ ಕಾಲುವೆ ಉಪ ಕಾಲುವೆಗಳಿವೆ.

ಕ್ರಮಸಂಖ್ಯೆ  ಜಿಲ್ಲೆ  ವಿಸ್ತೀರ್ಣ ಚ.ಕಿ.ಮೀ ಜನಸಂಖ್ಯೆ (2001) ಆಡಳಿತ ಕೇಂದ್ರ

	ರಾಯಲಸೀಮಾ ಪ್ರಾಂತ್ಯ			
1	ಅನಂತಪುರ	19,130	36,39,304	ಅನಂತಪುರ
2	ಚಿತ್ತೂರು	15,152	37,35,202	ಚಿತ್ತೂರು
3	ಕಡಪ	15,359	2,573,481	ಕಡಪ
4	ಕರ್ನೂಲ್	17,658	3,512,266	ಕರ್ನೂಲ್
	ಆಂಧ್ರ ಪ್ರಾಂತ್ಯ			
5	ಪೂರ್ವಗೋದಾವರಿ	10,807	4,872,622	ಕಾಕಿನಾಡ
6	ಗುಂಟೂರು	11,391	4,405,521	ಗುಂಟೂರು
7	ಕೃಷ್ಣ	8,734	4,218,416	ಮಚಲಿಪಟ್ಟಣ
8	ನೆಲ್ಲೂರು	13,076	2,659,661	ನೆಲ್ಲೂರು
9	ಪ್ರಕಾಶಂ	17,626	30,54,941	ಓಂಗೋಲೆ
10	ಶ್ರೀಕಾಕುಲಂ	58,037	25,28,491	ಶ್ರೀಕಾಕುಲಂ
11	ವಿಶಾಖಪಟ್ಟಣ	11,161	37,89,823	ವಿಶಾಖಪಟ್ಟಣ
12	ವಿಜಯನಗರ	6,539	22,45,103	ವಿಜಯನಗರ
13	ಪಶ್ಚಿಮ ಗೋದಾವರಿ	7,742	37,96,144	ಎಲ್ಲೂರು
	ತೆಲಂಗಾಣ ಪ್ರಾಂತ್ಯ			
14	ಅಡಿಲಾಬಾದ್	16,128	24,79,347	ಅಡಿಲಾಬಾದ್
15	ಹೈದರಾಬಾದ್	217	36,86,460	ಹೈದರಾಬಾದ್
16	ಕರೀಂನಗರ್	11,823	34,77,079	ಕರೀಂನಗರ್
17	ಕಮ್ಮಮ್	16,029	25,65,412	ಕಮ್ಮಮ್
18	ಮಹಬೂಬ್‍ನಗರ್	18,432	35,06,876	ಮಹಬೂಬ್‍ನಗರ್
19	ಮೇದಕ್	9,699	26,62,296	ಸಂಗರೆಡ್ಡಿ
20	ನಾಲ್ಗೊಂಡ	14,240	32,38,449	ನಾಲ್ಗೊಂಡ (ನಲಗೊಂಡ)
21	ನಿeóÁಮಾಬಾದ್	7,956	23,42,803	ನಿಜಾಮಾಬಾದ್
22	ರಂಗರೆಡ್ಡಿ	7,493	35,06,670	ಹೈದರಾಬಾದ್
23	ವಾರಂಗಲ್	12,846	32,31,174	ವಾರಂಗಲ್

ಹವಾಗುಣ : ಬೇಸಿಗೆ ಕಾಲದಲ್ಲಿ ರಾಯಲುಸೀಮೆ ಪ್ರದೇಶಗಳು, ತೀರ ಪ್ರದೇಶಗಳಲ್ಲಿ ಬಹಳ ಸೆಕೆಯಾಗಿದ್ದು 950-1100 ವರೆಗೆ ಉಷ್ಣತೆ ಹೊಂದಿರುತ್ತವೆ. ತೆಲಂಗಾಣ ಪ್ರದೇಶದ ಉತ್ತರ ಭಾಗ ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಅಲ್ಲಿ ಸೆಕೆ ಕಡಿಮೆ. ತೀರ ಪ್ರದೇಶಗಳು 80"-100" ಮಳೆ ಪಡೆಯುತ್ತವೆ. ರಾಯಲು ಸೀಮೆ ಜಿಲ್ಲೆಗಳಲ್ಲಿ 20"-30" ಮಳೆಯಾದರೆ ಹೆಚ್ಚು. ಉತ್ತರದ ಜಿಲ್ಲೆಗಳಲ್ಲಿ 35"-50" ಮಳೆಯಾಗುತ್ತದೆ.

ಕಾಡುಗಳು : ಆಂಧ್ರ ಪ್ರದೇಶದ ಒಟ್ಟು ವಿಸ್ತೀರ್ಣದಲ್ಲಿ ಶೇ.23 ಭಾಗ ಅರಣ್ಯ ಪ್ರದೇಶ. ಇದರಲ್ಲಿ ಟೀಕ್, ಕರ್ಪೂರ ಮರ, ಗೋಡಂಬಿ, ಕಾಸುರಿನ, ಬಿದಿರು ಮತ್ತು ಮೆದು ಮರಗಳು ಹೆಚ್ಚು ಬೆಳೆಯುತ್ತವೆ. ಪೂರ್ವ ಘಟ್ಟಗಳನ್ನೊಳಗೊಂಡಿರುವ ಈಶಾನ್ಯ ಜಿಲ್ಲೆಗಳಾದ ಶ್ರೀಕಾಕುಳಂ, ವಿಶಾಖಪಟ್ಟಣ, ಗೋದಾವರಿ ಜಿಲ್ಲೆ ಮತ್ತು ಕರ್ನೂಲು ಜಿಲ್ಲೆಗಳಲ್ಲಿ ಹೆಚ್ಚು ಕಾಡು ಪ್ರದೇಶಗಳಿವೆ.
ಖನಿಜಗಳು : ತೆಲಂಗಾಣ ಭಾಗದ ಉತ್ತರ ಜಿಲ್ಲೆಗಳಲ್ಲಿ ಕಲ್ಲಿದ್ದಲು ಗಣಿಗಳಿವೆ. ಈಶಾನ್ಯದ ಜಿಲ್ಲೆಗಳಾದ ಶ್ರೀಕಾಕುಳಂ ಮತ್ತು ವಿಶಾಖಪಟ್ಟಣ ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು, ಮ್ಯಾಂಗನೀಸ್ ಅದಿರು, ನೆಲ್ಲೂರು ಜಿಲ್ಲೆಯಲ್ಲಿ ಅಭ್ರಕ, ಹೈದರಾಬಾದ್ ಗುಂಟೂರು ಅದಿಲಾಬಾದ್ ಜಿಲ್ಲೆಗಳಲ್ಲಿ ಸುಣ್ಣಕಲ್ಲು, ಕರ್ನೂಲು ಜಿಲ್ಲೆಯಲ್ಲಿ ಬಾರೈಟಿಸ್, ಕಡಪ ಜಿಲ್ಲೆಯಲ್ಲಿ ಕಲ್ನಾರು ಅದಿರುಗಳು ಹೇರಳವಾಗಿವೆ. ಕಡಪ ಜಿಲ್ಲೆಯ ಕರಿಹಾಸುಕಲ್ಲು ದಕ್ಷಿಣಭಾರತದ ಅನೇಕ ಊರುಗಳಲ್ಲಿ ಉಪಯೋಗದಲ್ಲಿದೆ. 

ನೀರಾವರಿ : ಗೋದಾವರಿ, ಕೃಷ್ಣಾ ಮತ್ತು ಪೆನ್ನಾರ್ ನದಿಗಳ ಮುಖಜ ಭೂಮಿಗಳಲ್ಲಿ ನೀರಾವರಿ ಕಾಲುವೆಗಳು ನೂರಾರು ವರ್ಷಗಳಿಂದ ಬಳಕೆಯಲ್ಲಿವೆ. ಗೋದಾವರಿ ಮುಖಜಭೂಮಿಯ ಕಾಲುವೆಗಳಿಂದ 11 ಲಕ್ಷ ಎಕರೆ ಜಮೀನು, ಕೃಷ್ಣಾಮುಖಜಭೂಮಿಯ ಪ್ರಕಾಶಂ ಬ್ಯಾರೇಜ್‍ನಿಂದ ಹನ್ನೊಂದೂವರೆ ಲಕ್ಷ ಎಕರೆ ಜಮೀನು, ನಿಜಾಮಸಾಗರದಿಂದ (ಗೋದಾವರಿ ನದಿಯ ಉಪನದಿ ಮಂಜೀರಾ ನದಿಗೆ ಅಣೆಕಟ್ಟು) ಎರಡೂ ಮುಕ್ಕಾಲು ಲಕ್ಷ ಎಕರೆ ಜಮೀನು ಸಾಗುವಳಿಯಲ್ಲಿದೆ. ತುಂಗಭದ್ರ ನದಿಯಿಂದ ಹೊರಡುವ ಕಡಪ ಕರ್ನೂಲು ಕಾಲುವೆಯಿಂದ ಎರಡೂ ಮುಕ್ಕಾಲು ಲಕ್ಷ ಎಕರೆಗೆ ನೀರು ಒದಗಿದೆ. ತುಂಗಭದ್ರ ಅಣೆಕಟ್ಟಿನ ಕೆಳಭಾಗದ ಕಾಲುವೆಗಳ ಮತ್ತು ಹೈಲೆವೆಲ್ ಕಾಲುವೆಗಳಿಂದ 2 ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಕರ್ಯ ಒದಗುತ್ತದೆ. ಕೃಷ್ಣಾ ನದಿಗೆ ಅಡ್ಡಲಾಗಿ ಸುಮಾರು 140 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಟ್ಟಲಾಗುತ್ತಿರುವ ಅಣೆಕಟ್ಟು ನಾಗಾರ್ಜುನ ಸಾಗರವನ್ನು ನಿರ್ಮಿಸಿ 36 ಲಕ್ಷ ಎಕರೆಗೆ ನೀರೊದಗಿಸುತ್ತದೆ. 1967ನೆಯ ಇಸವಿಯಲ್ಲಿ ಸುಮಾರು 6 ಲಕ್ಷ ಎಕರೆ ಭೂಮಿಗೆ ನೀರೊದಗಿಸಲಾಗುತ್ತಿತ್ತು. 2000-2001ರಲ್ಲಿ ಎಲ್ಲಾ ಬಗೆಯ ನೀರಾವರಿಯಿಂದ ಒಟ್ಟು 45.28 ಲಕ್ಷ ಹೆಕ್ಟೇರುಗಳು ನೀರಾವರಿಗೆ ಒಳಪಡಿಸಲಾಗಿತ್ತು. ಈಶಾನ್ಯ ಭಾಗದಲ್ಲಿ ಮಚಕುಂಡ ವಿದ್ಯುಚ್ಛಕ್ತಿ ಯೋಜನೆ ಮತ್ತು ದಕ್ಷಿಣದಲ್ಲಿ ತುಂಗಭದ್ರಾ ವಿದ್ಯುತ್ ಯೋಜನೆಗಳಿಂದ ರಾಜ್ಯಕ್ಕೆ ಧಾರಾಳವಾಗಿ ವಿದ್ಯುತ್ ಒದಗುತ್ತದೆ.

ವ್ಯವಸಾಯ : ಶೇ.62 ಮಂದಿ ಕೃಷಿಕರು. ಬತ್ತ, ಜೋಳ, ಕಬ್ಬು, ದ್ವಿದಳ ಧಾನ್ಯಗಳು, ನೆಲಗಡಲೆ, ತೆಂಗುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಮೆಣಸಿನಕಾಯಿ, ಹರಳು ಬೀಜ, ಹೊಗೆಸೊಪ್ಪು, ಹುಣಸೇಹಣ್ಣು, ಮಾವಿನ ಹಣ್ಣು, ಬೆಳೆಗಳಿಗೆ ಆಂಧ್ರಪ್ರದೇಶ ಪ್ರಖ್ಯಾತವಾಗಿದೆ. ಗುಂಟೂರು ಜಿಲ್ಲೆಯಲ್ಲಿ ಹೊಗೆಸೊಪ್ಪನ್ನು ಹೆಚ್ಚಾಗಿ ಬೆಳೆಸುತ್ತಾರೆ.
ಕೈಗಾರಿಕೆಗಳು: ವಿಶಾಖಪಟ್ಟಣದಲ್ಲಿ ಭಾರಿ ಹಡಗುಗಳನ್ನು ನಿರ್ಮಿಸುತ್ತಾರೆ. ಅಲ್ಲಲ್ಲಿ ಭಾರಿ ಹತ್ತಿ ಗಿರಣಿಗಳು ಇವೆ. ಹೈದರಾಬಾದ ನಗರದಲ್ಲಿ ಹತ್ತಿ ಗಿರಣಿಗಳು, ಉಕ್ಕಿನ ಫರ್ನಿಚರ್ ಕಾರ್ಖಾನೆ, ಸಿಗರೇಟು ಬೀಡಿ ಕಾರ್ಖಾನೆಗಳು ಇವೆ. ರಾಜಮಹೇಂದ್ರಿ, ಸಿರ್‍ಪೂರ್‍ಗಳಲ್ಲಿ ಕಾಗದ ತಯಾರಿಸುವ ಭಾರಿ ಕಾರ್ಖಾನೆಗಳಿವೆ. ನಿಜಾಮಸಾಗರ ಸಕ್ಕರೆ ಕಾರ್ಖಾನೆ ಭಾರತದಲ್ಲೆ ಬಹು ದೊಡ್ಡ ಕಾರ್ಖಾನೆ. ಗೂಡೂರಿನಲ್ಲಿ ಗಾಜು ಮತ್ತು ಗಾಜಿನ ಪದಾರ್ಥ ತಯಾರಿಸುವ ಭಾರಿ ಉದ್ಯಮವಿದೆ. ಸಣ್ಣ ಕೈಗಾರಿಕೆಗಳಲ್ಲಿ ವಾರಂಗಲ್ ಮತ್ತು ಎಲ್ಲೂರಿನ ರತ್ನಗಂಬಳಿ ಜಮಖಾನುಗಳು; ಧರ್ಮಾವರಂ, ನಾರಾಯಣ ಪೇಟೆಗಳ ರೇಷ್ಮೆ ಮತ್ತು ಜರೀ ಸೀರೆಗಳು; ಗದ್ವಾಲ್, ಸಿದ್ದಿಪೇಟೆಗಳ ನೂಲಿನ ಸೀರೆಗಳು, ಬಿದ್ರಿ ಕೆಲಸ, ನಾಜೂಕಿನ ಬಗೆಗಳು; ನರಸಾಪುರದ ಅರಗುಮೆರಗಿನ ವಸ್ತುಗಳು; ಕರೀಂ ನಗರದ ಬೆಳ್ಳಿ ಎಲೆಗಳಿಂದ ಮಾಡಿದ ನಾಜೂಕಿನ ಕೆಲಸ; ನಿರ್ಮಲ, ಕೊಂಡಪಲ್ಲಿ, ನಕ್ಕಪಲ್ಲಿ ಮತ್ತು ತಿರುಪತಿಯ ಬಣ್ಣ ಬಣ್ಣದ ಆಟದ ಸಾಮಾನುಗಳಿಗೆ ಭಾರತದಲ್ಲೂ ಪರದೇಶಗಳಲ್ಲೂ ಒಳ್ಳೆ ಗಿರಾಕಿ ಇದೆ. ತೆಂಗಿನ ಹುರಿ ಮಾಡುವದು, ಚರ್ಮದ ಕೆಲಸಗಳು ಸಾವಿರಾರು ಜನಗಳಿಗೆ ಉದ್ಯೋಗ ಕಲ್ಪಿಸಿವೆ.
31 ಮಾರ್ಚ್ 2002ರಲ್ಲಿ ರಾಜ್ಯದಲ್ಲಿ 3111 ಬಾರಿಯ ಮತ್ತು ಮಧ್ಯಮ ಕೈಗಾರಿಕೆಗಳಿದ್ದು 43,317 ಕೋಟಿ ಬಂಡವಾಳ ಹೂಡಿದ್ದು 8,02,878 ಮಂದಿಗೆ ಉದ್ಯೋಗ ಲಭಿಸಿತ್ತು. ಜೊತೆಗೆ 3,29,444 ಸಣ್ಣ ಕೈಗಾರಿಕೆಗಳಿದ್ದು 28,09,468 ಮಂದಿಗೆ ಉದ್ಯೋಗ ಲಭಿಸಿತ್ತು.

ಸಂಚಾರ ಸೌಲಭ್ಯಗಳು : ರಾಜ್ಯದಲ್ಲಿ 4,544 ಕಿ.ಮೀ. ರೈಲು ಮಾರ್ಗಗಳಿವೆ. ಸಿಕಂದರಾಬಾದ್ ನಗರ ಸೌತ್ ಸೆಂಟ್ರಲ್ ವಲಯದ ಆಡಳಿತಕೇಂದ್ರ. ಹೈದರಾಬಾದಿನ ಬಳಿ ಇರುವ ಬೇಗಂಪೇಟ್ ವಿಮಾನ ನಿಲ್ದಾಣ ವಿಮಾನ ಸಂಚಾರ ಕೇಂದ್ರ. ರಾಜ್ಯದ ಪೂರ್ವ ತೀರದಲ್ಲಿರುವ ವಿಶಾಖಪಟ್ಟಣ, ಕಾಕಿನಾಡ, ಮಚಲಿಪಟ್ಟಣಗಳು ಹಡಗು ನಿಲ್ದಾಣಗಳು ಮಾರ್ಚ್ 2002ರಲ್ಲಿ ಈ ರಾಜ್ಯದಲ್ಲಿ 4,104 ಕಿ.ಮೀ ರಾಷ್ಟ್ರೀಯ ಹೆದ್ದಾರಿ 60,453 ಕಿ.ಮೀ ರಾಜ್ಯ ಹೆದ್ದಾರಿ, 1,03,814 ಕಿ.ಮೀ ಪಂಚಾಯಿತಿಗೆ ಸೇರಿದ ಮಾರ್ಗಗಳಿದ್ದವು. ಒಟಟು 5095 ಕಿ.ಮೀ ರೈಲು ಮಾರ್ಗದಲ್ಲಿ 4,362 ಕಿ.ಮೀ ಬ್ರಾಡ್‍ಗೇಜ್ 686 ಕಿ.ಮೀ ಮೀಟರ್‍ಗೇಜ್ ಉಳಿದದ್ದು ನ್ಯಾರೊಗೇಜ್ ರೈಲುಮಾರ್ಗಗಳಿದ್ದವು. ಹೈದರಾಬಾದಿನಿಂದ ಭಾರತದ ಮತ್ತು ಪ್ರಪಂಚದ ಮುಖ್ಯನಗರಗಳಿಗೆ ವಿಮಾನ ಸಂಪರ್ಕವಿದೆ. ವಿಶಾಖಪಟ್ಟಣ, ಕಾಕಿನಾಡ, ಮಚಲಿಪಟ್ಟಣ, ಕಾಳಿಂಗಪಟ್ಟಣ, ವಡರೇವು ಮತ್ತು ಕೃಷ್ಣಪಟ್ಟಣ ಇವು ಮುಖ್ಯ ಬಂದರುಗಳು.
ಪ್ರೇಕ್ಷಣೀಯ ಸ್ಥಳಗಳು: ಮುಖ್ಯವಾದುದು ಹೈದರಾಬಾದ್: ಹೈದರಾಬಾದ್ ಸಂಸ್ಥಾನದ ನಿಜಾಮಶಾಹಿ ಆಡಳಿತ ಕೇಂದ್ರವಾಗಿದ್ದ ಇಲ್ಲಿ ಇಂಡೊ-ಮುಸ್ಲಿಂ ಮತ್ತು ಪಾಶ್ಚಾತ್ಯ ಪರಂಪರೆಯ ಸಮ್ಮಿಳಿತ ಮಾದರಿಯ ಅನೇಕ ಭವ್ಯ ಕಟ್ಟಡಗಳಿವೆ. ಇವುಗಳಲ್ಲಿ ಚಾರಮಿನಾರ್, ಚಾರಕಮಾನ್, ಬಾದಶಾಹಿ ಅಷೂರಖಾನಾ, ಮುಷೀರಾಬಾದ್ ಮಸೀದಿ, ಫಲಕ್‍ನುಮಾ ಅರಮನೆಗಳು ಪ್ರಖ್ಯಾತವಾಗಿವೆ. ಈಗಿನ ಕಟ್ಟಡಗಳಲ್ಲಿ ಉಸ್ಮಾನಿಯ ವಿಶ್ವವಿದ್ಯಾಲಯ ಕಟ್ಟಡಗಳು, ಹೈಕೋರ್ಟ್ ಕಟ್ಟಡಗಳು ಭವ್ಯವಾಗಿವೆ. ಹೆಲ್ತ್ ಮ್ಯೂಸಿಯಂ, ಅಜಂತಾ ಪೆವಿಲಿಯನ್, ಸಾರಾಲಜಂಗ್, ಮ್ಯೂಸಿಯಂಗಳು ಆಕರ್ಷಕ ಸ್ಥಳಗಳು. ಗೋಲ್ಕಂಡ ಕೋಟೆ (ಕುತುಬ್ ಷಾಹಿ ಅರಸರ ಕೋಟೆ, ಅರಮನೆಗಳು), ವಾರಂಗಲ್ (ಕಾಕತೀಯ ರಾಜರು ಕಟ್ಟಿಸಿದ ಪ್ರಸಿದ್ಧ ದೇವಾಲಯಗಳು), ಶ್ರೀಶೈಲ (ಮಲ್ಲಿಕಾರ್ಜುನಲಿಂಗ ದೇವಸ್ಥಾನ), ತಿರುಪತಿ (ವೇಂಕಟೇಶ್ವರ, ಬಾಲಾಜಿ ದೇವಸ್ಥಾನ), ಕಾಳಹಸ್ತಿ, ಸಿಂಹಾಚಲ, ಭದ್ರಾಚಲ, ಲೇಪಾಕ್ಷಿಗಳು ಪ್ರಸಿದ್ಧ ಯಾತ್ರಾಸ್ಥಳಗಳಲ್ಲದೆ ಉತ್ತಮ ಕಲಾಕೃತಿಗಳನ್ನು ಹೊಂದಿವೆ. ಲಕ್ಷಾಂತರ ಯಾತ್ರಾರ್ಥಿಗಳು ಇವನ್ನು ಸಂದರ್ಶಿಸುತ್ತಾರೆ.

ಸಂಸ್ಕøತಿ: ಆಂಧ್ರದ ಭಾಷೆ ತೆಲಗು, ಬಹು ಮಧುರ. ದಾಕ್ಷಿಣಾತ್ಯ ಸಂಗೀತದ ಶ್ರೀ ತ್ಯಾಗರಾಜರ ಕೀರ್ತನೆಗಳು ತೆಲಗು ಭಾಷೆಯಲ್ಲಿವೆ. ಆಂಧ್ರದ ಪ್ರತಿ ಊರಿನಲ್ಲೂ ದೇವಸ್ಥಾನದ ರಥೋತ್ಸವಗಳು, ಜಾತ್ರೆಗಳು, ಬಹಳ ವಿಜೃಂಭಣೆಯಿಂದ ಜರಗುತ್ತವೆ. ರೈತಕೋಟಿ ಏರುವಾಕ ಸುಗ್ಗಿಯ ಸಂಭ್ರಮವನ್ನು ಜನಪದ ನೃತ್ಯಗೀತೆಗಳಿಂದಲೂ ಉತ್ಸಾಹ ಭರಿತ ಸಂಪ್ರದಾಯಗಳಿಂದಲೂ ಆಚರಿಸುತ್ತಾರೆ. ಕೂಚುಪುಡಿ ನೃತ್ಯ, ಭಾಗವತ ಸಂಗೀತ- ಸಾಹಿತ್ಯ ಹರಿಕಥೆಗಳು ಆಂಧ್ರದ ವೈಶಿಷ್ಟ್ಯಗಳು.         (ಆರ್.ಎಂ.ಆರ್.)

ಆಂಧ್ರ ಪ್ರದೇಶದ ಚರಿತ್ರೆ : ಪುರಾಣ ಗ್ರಂಥಗಳ ಪ್ರಕಾರ ಆಂಧ್ರ ಎಂಬುದು ಜಾತಿ ಇಲ್ಲವೇ ಕುಲಸೂಚಕವಾದ ಪದ. ಐತರೇಯ ಬ್ರಾಹ್ಮಣದಲ್ಲಿ ಆಂಧ್ರದ ಅತ್ಯಂತ ಪ್ರಾಚೀನ ಉಲ್ಲೇಖವನ್ನು ಕಾಣಬಹುದು. ಕಾಲಕ್ರಮದಲ್ಲಿ ಆಂಧ್ರ ಎಂಬ ಪದಕ್ಕೆ ಭೌಗೋಳಿಕ ಅರ್ಥವ್ಯಾಪ್ತಿಯುಂಟಾಗಿ ಆಂಧ್ರರು ವಾಸಮಾಡುವ ದೇಶಕ್ಕೆ ಆಂಧ್ರದೇಶವೆಂಬ ಹೆಸರು ಬಂದಿತು. ಆಂಧ್ರದೇಶ ಅಶೋಕನ ಸಾಮ್ರಾಜ್ಯಕ್ಕೆ ಸೇರಿತ್ತೆಂದು ಹೇಳಲು, ಯರ್ರಗುಡಿ, ಅಮರಾವತಿ ಮುಂತಾದ ಕಡೆಗಳಲ್ಲಿ ಸಿಕ್ಕಿರುವ ಅವನ ಶಾಸನಗಳೇ ಆಧಾರವಾಗಿವೆ. ಅವನ ಶಾಸನವೊಂದರಲ್ಲಿ ರಥಿಕರು, ಭೋಜಕರು, ಪುಳಿಂದು ಮುಂತಾದವರೊಡನೆ ಆಂಧ್ರರ ಹೆಸರು ಇದೆ. ಆಕಾಲದಲ್ಲಿ ಆಂಧ್ರರು ದಕ್ಷಿಣಾಪಥದ ಮಧ್ಯ ಮತ್ತು ದಕ್ಷಿಣ ಭಾಗಗಳನ್ನು ಆಳುತ್ತಿದ್ದರೆಂದು ಹೇಳಬಹುದು. 
ಖಚಿತವಾದ ಆಂಧ್ರಪ್ರದೇಶದ ಚರಿತ್ರೆ ಶಾತವಾಹನರೊಂದಿಗೆ ಪ್ರಾರಂಭವಾಗುತ್ತದೆ. ಶಾತವಾಹನರುಗಳನ್ನು ಪುರಾಣಗಳಲ್ಲಿ ಆಂಧ್ರರು ಮತ್ತು ಆಂಧ್ರಭೃತ್ಯರು ಎಂದು ಕರೆದಿದೆ. ಶಾತವಾಹನರ ಉಗಮದ ವಿಚಾರವಾಗಿ ಖಚಿತವಾದ ಮಾಹಿತಿ ದೊರಕಿಲ್ಲ. ಅಷ್ಟೇ ಅಲ್ಲದೆ ಅವರು ಆಳಿದ ಕಾಲ ಮತ್ತು ವಿವಿಧ ರಾಜರುಗಳ ವಿಚಾರವಾಗಿಯೂ ನಿಖರವಾದ ಚಾರಿತ್ರಿಕ ವಿಷಯಗಳು ಉಪಲಬ್ಧವಾಗಿಲ್ಲ. ಶಾತವಾಹನರ ಮೂಲ ನಿವಾಸಸ್ಥಾನ ಕರ್ನಾಟಕದ ಬಳ್ಳಾರಿ ಜಿಲ್ಲೆಯಾಗಿತ್ತೆಂದೂ ಇಲ್ಲಿಂದ ಅವರು ಆಂಧ್ರ ದೇಶಕ್ಕೆ ವಲಸೆ ಹೋದರೆಂದು ಸಾಮಾನ್ಯವಾಗಿ ಎಲ್ಲ ಚರಿತ್ರಕಾರರೂ ಒಪ್ಪುತ್ತಾರೆ. ಆಂಧ್ರ ದೇಶದಲ್ಲಿ ಮೊಟ್ಟಮೊದಲನೆಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಶಾತವಾಹನರು ಕ್ರಿ.ಪೂ. 230ರಿಂದ ಸುಮಾರು ನಾಲ್ಕುನೂರಾ ಐವತ್ತು ವರ್ಷಗಳ ಕಾಲ ರಾಜ್ಯಭಾರ ಮಾಡಿದರು. ಶ್ರೀಮುಖನೇ ಇವರ ಮೊಟ್ಟಮೊದಲನೆಯ ದೊರೆ. ಆನಂತರ ಇವನ ಸಹೋದರನಾದ ಕನ್ಹ ರಾಜನಾದ (207-189). ಮುಂದಿನ ರಾಜನಾದ ಶ್ರೀ ಶಾತಕರ್ಣಿ ನಾನಾಘಾಟ್ ಎಂಬಲ್ಲಿ ದೊರಕಿರುವ ಶಿಲ್ಪಗಳಲ್ಲಿ ತನ್ನ ರಾಣಿ ನಾಗಕನ್ನಿಕೆಯೊಡನೆ ಚಿತ್ರಿತನಾಗಿದ್ದಾನೆ. ಈತ ಪಶ್ಚಿಮ ಮಾಳ್ವ ದೇಶವನ್ನು ಗೆದ್ದು, ಅಶ್ವಮೇಧವೇ ಮೊದಲಾದ ಅನೇಕ ಯಾಗಗಳನ್ನು ಮಾಡಿದ. ಸ್ವಲ್ಪ ಕಾಲದ ನಂತರ ಆಳಿದ ಎರಡನೆಯ ಶಾತಕರ್ಣಿ 56 ವರ್ಷಗಳ ಕಾಲ ರಾಜನಾಗಿದ್ದ. ಇವನ ರಾಜ್ಯ ಮಧ್ಯಪ್ರದೇಶದವರೆಗೂ ಹರಡಿತ್ತು. ಹದಿನೇಳನೆಯ ಶಾತವಾಹನ ರಾಜನಾದ ಹಾಲ ಶಪ್ತಶತಿ ಎಂಬ ಪ್ರಾಕೃತ ಗ್ರಂಥಗಳನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ಖ್ಯಾತನಾಗಿದ್ದಾನೆ. ಇದು ಏಳುನೂರು ಶೃಂಗಾರ ಪದ್ಯಗಳ ಸಂಕಲನ.

  	ಅನಂತರ ಶಕರು, ಪಹ್ಲವರು, ಯವನರು ಬಲಯುತರಾದುದರಿಂದ ಶಾತವಾಹನರ ಪ್ರಾಬಲ್ಯ ಕಡಿಮೆಯಾಯಿತು. ಗೌತಮಿಪುತ್ರ ಶಾತಕರ್ಣಿಯೆಂಬ (ಕ್ರಿ.ಶ.80-104) ಶಾತವಾಹನ ರಾಜ ಶಕರು, ಪಹ್ಲವರು ಯವನರನ್ನು ಸೋಲಿಸಿ ಶಾತವಾಹನ ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಿದ. ಈತ ನಹಪಾನನನ್ನು ಸೋಲಿಸಿದ. ಶಕರಿಂದ ಉತ್ತರ ಮಹಾರಾಷ್ಟ್ರ, ಕೊಂಕಣ, ಸೌರಾಷ್ಟ್ರ, ಮಾಳ್ವ ಮುಂತಾದ ಪ್ರದೇಶಗಳನ್ನು ಕಿತ್ತುಕೊಂಡ. ತಾಯಿಯಾದ ಗೌತಮೀ ಬಲಶ್ರೀ ಕೆತ್ತಿಸಿದ ನಾಸಿಕದ ಶಾಸನದಲ್ಲಿ ಗೌತಮಿಪುತ್ರ ಸಾಧಿಸಿದ ಮಹಾತ್ಕಾರ್ಯಗಳು ವರ್ಣಿತವಾಗಿವೆ. ಈತ ಶಾತವಾಹನ ಕುಲದಲ್ಲಿಯೇ ಅತ್ಯಂತ ಪ್ರಸಿದ್ಧ ದೊರೆ. ಅನಂತರ ಇವನ ಮಗನಾದ ಪುಲಮಾವಿ ರಾಜನಾದ. ಇವನ ಕಾಲದಲ್ಲಿ ಶಕರು ಅನೇಕ ಭಾಗಗಳನ್ನು ಗೆದ್ದುಕೊಂಡರು. ತರುವಾಯ ಆಳಿದ ಶಾತಕರ್ಣಿ ಕ್ಷತ್ರಪ ರುದ್ರದಾಮನ ಮಗಳನ್ನು ವಿವಾಹವಾದ. ಆದರೂ ರುದ್ರದಾಮ ಕೊಂಕಣ ಮತ್ತು ನರ್ಮದಾ ಪ್ರದೇಶಗಳನ್ನು ಶಾತವಾಹನರಿಂದ ಕಿತ್ತುಕೊಂಡ. ಶ್ರೀಯಜ್ಞ ಶಾತಕರ್ಣಿಯೇ (170-199) ಶಾತವಾಹನರ ಕೊನೆಯ ಪ್ರಸಿದ್ಧ ದೊರೆ. ಈತ ಶಕರಾಜರ ಮೇಲೆ ಯುದ್ಧವನ್ನು ಮಾಡಿ ಅವರಿಂದ ಕೆಲವು ಪ್ರದೇಶಗಳನ್ನು ಕಿತ್ತುಕೊಂಡು, ಹೊಸ ನಮೂನೆಯ ಅನೇಕ ನಾಣ್ಯಗಳನ್ನು ಅಚ್ಚು ಹಾಕಿಸಿದ. ಅನಂತರ ಆಳಿದ ಶಾತವಾಹನ ರಾಜರ ಹೆಸರುಗಳು ಮಾತ್ರ ನಾಣ್ಯಗಳಿಂದ ದೊರಕಿವೆ. ಇವರು ಬಲಶಾಲಿಗಳಲ್ಲದೇ ಇದ್ದುದರಿಂದ, ಇಕ್ಷ್ವಾಕುವಂಶದ ವಾಸಿಷ್ಠೀಪುತ್ರ ಶ್ರೀಶಾಂತಮೂಲನೆಂಬಾತ ನಾಗಾರ್ಜುನಕೊಂಡ ಪ್ರಾಂತ್ಯದಲ್ಲಿ ಇಕ್ಷ್ವಾಕುವಂಶದ ರಾಜ್ಯವನ್ನು ಸ್ಥಾಪಿಸಿದ. ಸುಮಾರು ಕ್ರಿ.ಶ. 218ರ ಸಮಯಕ್ಕೆ ಶಾತವಾಹನರ ಸಾಮ್ರಾಜ್ಯದ ಪತನವಾಯಿತು.

ನಾಗಾರ್ಜುನಕೊಂಡ ಪ್ರಾಂತದಲ್ಲಿ ತಲೆ ಎತ್ತಿದ ಇಕ್ಷ್ವಾಕುವಂಶದಲ್ಲಿ ವಾಸಿಷ್ಠೀಪುತ್ರ ಶಾಂತಮೂಲ, ಶ್ರೀ ವೀರಪುರುಷದತ್ತ, ಎರಡನೆಯ ಶಾಂತಮೂಲ ಮತ್ತು ಎರಡನೆಯ ವೀರಪುರುಷದತ್ತರು ಆಳಿದರು. ಇವರ ಆಳ್ವಿಕೆಯಲ್ಲಿ ನಾಗಾರ್ಜುನಕೊಂಡದ ಬಹುಭಾಗದಲ್ಲಿ ಬೌದ್ಧ ಶಿಲ್ಪಗಳು ನಿರ್ಮಿತವಾದವು. ಇವರ ಆಳ್ವಿಕೆ ಕ್ರಿ.ಶ. 270ರಲ್ಲಿ ಕೊನೆಗೊಂಡಿತು. ಇಕ್ಷ್ವಾಕು ರಾಜರನ್ನು ಸೋಲಿಸಿ ಪಲ್ಲವ ಸಿಂಹವರ್ಮ ಆಂಧ್ರ ದೇಶದ ಬಹುಭಾಗಗಳಲ್ಲಿ ಪಲ್ಲವ ರಾಜ್ಯವನ್ನು ಸ್ಥಾಪಿಸಿದ. ಈತ ಧಾನ್ಯಕಟಕ (ಗುಂಟೂರು) ದಲ್ಲಿ ಒಬ್ಬ ಪ್ರಾಂತಾಧಿಕಾರಿಯನ್ನು ನಿಯಮಿಸಿದ. ಸ್ವಲ್ಪ ಕಾಲದನಂತರ ಬಾದಾಮಿಯ ಚಾಲುಕ್ಯರು ಪಲ್ಲವರ ಪ್ರಾಬಲ್ಯವನ್ನು ಕಡಿಮೆ ಮಾಡಿದರು.

ಗೋದವರಿ ಮತ್ತು ಕೃಷ್ಣಾ ನದಿಗಳ ಪ್ರದೇಶ ಬೃಹತ್ಫಲಾಯನ, ಶಾಲಂಕಾಯನ ಮತ್ತು ವಿಷ್ಣುಕುಂಡಿನ್ ವಂಶದ ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ವಿಷ್ಣುಕುಂಡಿನ್ ವಂಶದ ಅರಸರು ವೆಂಗಿ ರಾಜ್ಯವನ್ನು ಸುಮಾರು 150 ವರ್ಷಗಳ ಕಾಲ ಆಳಿದರು. ವಿಕ್ರಮೇಂದ್ರ ವರ್ಮನಿಂದ ಸ್ಥಾಪಿತವಾದ ಈ ವಂಶದಲ್ಲಿ ಮಾಧವವರ್ಮ ಅತ್ಯಂತ ಪ್ರಸಿದ್ಧ ದೊರೆ. ಇವರೂ ಬಾದಾಮಿಯ ಚಾಲುಕ್ಯರಿಂದ ಸೋಲಿಸಲ್ಪಟ್ಟರು. ಬಾದಾಮಿಯ ಚಾಲುಕ್ಯ ದೊರೆ ಎರಡನೆಯ ಪುಲಕೇಶಿ ಆಂಧ್ರ ದೇಶವನ್ನು ಗೆದ್ದು, ತನ್ನ ತಮ್ಮನಾದ ಕುಬ್ಜ ವಿಷ್ಣುವರ್ಧನನ ವಶಕ್ಕೆ ಒಪ್ಪಿಸಿದ. ಇದೇ ಮುಂದೆ ವೆಂಗಿಯ ಚಾಲುಕ್ಯ ವಂಶವೆಂದು ಪ್ರಸಿದ್ಧವಾಯಿತು. ಸುಮಾರು ಕ್ರಿ.ಶ. 625ರಿಂದ ಆರಂಭವಾದ ಈ ರಾಜ್ಯ ಸುಮಾರು 450 ವರ್ಷಗಳ ಕಾಲ ಬಾಳಿತು. ಕ್ರಿ.ಶ.753 ರಿಂದ 972 ರವರೆಗೆ ಚಾಲುಕ್ಯರಿಗೂ ರಾಷ್ಟ್ರಕೂಟರಿಗೂ ಸತತ ಕದನಗಳು ನಡೆದವು. ಅನಂತರ ವೆಂಗಿಯ ರಾಜಕೀಯದಲ್ಲಿ ಚೋಳರು ಪ್ರವೇಶಿಸಿದರು. ಕ್ರಿ.ಶ 11ನೆಯ ಶತಮಾನದಿಂದ ಚಾಳುಕ್ಯ-ಚೋಳರ ಆಳ್ವಿಕೆ ಪ್ರಾರಂಭವಾಯಿತು. ಮಧುರೆಯ ಪಾಂಡ್ಯರು ಬಲಶಾಲಿಗಳಾದ ಮೇಲೆ ಚಾಳುಕ್ಯ-ಚೋಳರ ಪತನವಾಯಿತು.

ಆಂಧ್ರದೇಶದ ಶ್ರೀಕಾಕುಳಂ, ವಿಶಾಖಪಟ್ಟಣ ಮುಂತಾದ ಕೆಲವು ಜಿಲ್ಲೆಗಳು ಪ್ರಾಚೀನ ಕಾಲದಿಂದ ಕಳಿಂಗ ರಾಜ್ಯದಲ್ಲಿ ಸೇರಿ ಹೋಗಿದ್ದವು. ಕರ್ಣಾಟಕದ ಗಂಗವಾಡಿಯಿಂದ ಗಂಗರ ಮನೆತನವೊಂದು ಕಳಿಂಗಕ್ಕೆ ಹೋಗಿ ನೆಲೆಸಿ ಪ್ರಸಿದ್ಧವಾಯಿತು. ಕ್ರಿ.ಶ 5ನೆಯ ಶತಮಾನದಿಂದ 15ನೆಯ ಶತಮಾನದವರೆಗೆ ಆಂಧ್ರ ಮತ್ತು ಒರಿಸ್ಸಾದ ಅನೇಕ ಭಾಗಗಳು ಪೂರ್ವ ಗಂಗರ ರಾಜ್ಯಕ್ಕೆ ಸೇರಿದ್ದವು. ಇವರಲ್ಲಿ ಅನಂತರ ವರ್ಮ ಜೋಡಗಂಗ ಅತ್ಯಂತ ಪ್ರಸಿದ್ಧ.

ಹೀಗೆ ವಿವಿಧ ಭಾಗಗಳಾಗಿ ಹರಿದು ಹಂಚಿ ಹೋಗಿದ್ದ ಆಂಧ್ರ ದೇಶವನ್ನು ಒಂದುಗೂಡಿಸಿ ಎರಡನೆಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಕಾಕತೀಯರು. ಓರಂಗಲ್ಲನು ತಮ್ಮ ರಾಜಧಾನಿಯಾಗಿ ಮಾಡಿಕೊಂಡ ಕಾಕುತೀಯರ ಕಾಲದಲ್ಲಿ ತೆಲಗು ಭಾಷೆ, ಸಾಹಿತ್ಯಗಳು ವಿಶೇಷವಾಗಿ ಅಭಿವೃದ್ಧಿ ಹೊಂದಿದುವು. ಕಾಕುತೀಯ ರಾಜರಲ್ಲಿ ಗಣಪತಿದೇವ (ಕ್ರಿ.ಶ 1198-1262) ಮುಖ್ಯನಾದವ. ತರುವಾಯ ಆಳಿದ ಇವನ ಮಗಳಾದ ರುದ್ರಮದೇವಿ (1262-1296) ಭಾರತದ ಚರಿತ್ರೆಯಲ್ಲಿಯೇ ಮುಖ್ಯವಾದ ರಾಣಿಯರಲ್ಲೊಬ್ಬಳು. ಇವಳು ಸಮಕಾಲೀನ ರಾಜರನ್ನು ಸೋಲಿಸಿ ವಿಶಾಲವಾದ ಆಂಧ್ರವನ್ನು ಆಳುತ್ತಿದ್ದಳು. ಮೊಮ್ಮಗ ಪ್ರತಾಪರುದ್ರ (ಕ್ರಿ.ಶ. 1296-1323) ಅತಿ ಧೈರ್ಯದಿಂದ ಹೋರಾಡಿ ಮುಸ್ಲಿಮರನ್ನು ಮೊದಲು ಸೋಲಿಸಿದನಾದರೂ ಆಂಧ್ರ ಮುಸ್ಲಿಮರ ವಶವಾಯಿತು. ಸ್ವಲ್ಪಕಾಲದಲ್ಲೇ ಆಂಧ್ರರು ಮುಸ್ಲಿಮರ ಪ್ರಭುತ್ವವನ್ನು ಕಿತ್ತೊಗೆಯಲು ಪ್ರಯತ್ನಿಸಿದರಾದರೂ ಸಮರ್ಥ ಸಾಮ್ರಾಜ್ಯವನ್ನು ಕಟ್ಟಲಾರದೆ ಹೋದರು. ಕಾಕತೀಯ ಸಾಮ್ರಾಜ್ಯದ ಪತನಾನಂತರ ಆಂಧ್ರ ಐದು ರಾಜ್ಯಗಳಾಗಿ ವಿಭಾಗವಾಯಿತು. ಕೊಂಡವೀಡು ರೆಡ್ಡಿರಾಜ್ಯ, ರಾಜಮಹೇಂದ್ರಿಯ ರೆಡ್ಡಿರಾಜ್ಯ, ವೆಲಮರಾಜ್ಯ, ಉತ್ತರ ತೆಲಂಗಾಣ ಮತ್ತು ವಿಜಯನಗರ ಸಾಮ್ರಾಜ್ಯ ಇವೇ ಆ ಐದು ರಾಜ್ಯಗಳು. ಕ್ರಿ.ಶ 1325ರಲ್ಲಿ ಸ್ಥಾಪಿತವಾದ ಕೊಂಡವೀಡು ರೆಡ್ಡಿರಾಜ್ಯದಲ್ಲಿ ಪ್ರೋಲಯ, ಅನಪೋತ, ಅನಮೇವ, ಪೆದ್ದಕೋಮಟಿವೇಮ ಮುಂತಾದ ರಾಜರು ಆಳಿದರು. ಕೊನೆಗೆ ಇದು ವಿಜಯನಗರ ರಾಜ್ಯದಲ್ಲಿ ಲೀನವಾಯಿತು.

ಕ್ರಿ.ಶ 14ನೆಯ ಶತಮಾನದಲ್ಲಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯದಲ್ಲಿ ಆಂಧ್ರದೇಶ ಮತ್ತೆ ಐಕ್ಯಗೊಂಡಿತು. ವಿಜಯನಗರದ ಉಗಮ ಆಂಧ್ರರಿಂದಲೇ ಆಯಿತು ಎನ್ನುವ ಅಭಿಪ್ರಾಯವೂ ಕೆಲವು ಚರಿತ್ರಕಾರರಿಂದ ಮನ್ನಣೆ ಪಡೆದಿದೆ. ಕ್ರಿ.ಶ.1336-1485 ರವರೆಗೆ ಸಂಗಮ ವಂಶದ ಅರಸುಗಳೂ, 1485-1504ರವರೆಗೆ ಸಾಳವ ಮನೆತನದ ರಾಜರೂ, 1505-1570 ರವರೆಗೆ ತುಳುವ ವಂಶದ ರಾಜರೂ, ಅನಂತರ ಅರವೀಡು ಮನೆತನದ ರಾಜರೂ ಆಳಿದರು. ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದಲ್ಲಿ ಅತ್ಯಂತ ಶ್ರೇಷ್ಠ ದೊರೆಯೆನಿಸಿಕೊಂಡ. ತೆಲಗು ಮತ್ತು ಕನ್ನಡ ಕವಿಗಳಿಗೆ ಆಶ್ರಯದಾತನಾಗಿದ್ದ ಇವನ ಕಾಲದಲ್ಲಿ ತೆಲಗು ಸಂಸ್ಕøತಿ ಅಭಿವೃದ್ಧಿ ಹೊಂದಿತು. ಸುಲ್ತಾನರಿಗೂ ವಿಜಯನಗರದ ಅರಸುಗಳಿಗೂ ನಡೆದ ರಕ್ಕಸತಂಗಡಿ ಯುದ್ಧದಿಂದ ವಿಜಯನಗರ ಸಾಮ್ರಾಜ್ಯದ ಅವನತಿ ಪ್ರಾರಂಭವಾಯಿತು. 		(ನೋಡಿ- ವಿಜಯನಗರ)

ಈ ಮಧ್ಯದಲ್ಲಿ ಹಸನ್ ಎಂಬುವನಿಂದ ಸ್ಥಾಪಿತವಾದ ಬಹುಮನಿ ರಾಜ್ಯ ಆಂಧ್ರದ ಕೆಲವು ಭಾಗಗಳನ್ನು ವಶಮಾಡಿಕೊಂಡಿತು. ನಾಲ್ಕನೆಯ ಮಹಮ್ಮದ್‍ಷಾ ಎಂಬ ದೊರೆ ತೆಲಂಗಾಣಕ್ಕೆ ಸುಲ್ತಾನ್ ಕುಲಿ ಎಂಬುವನನ್ನು ಪ್ರಾಂತ್ಯಾಧಿಕಾರಿಯನ್ನಾಗಿ ನಿಯಮಿಸಿದ. ಈತ ತಾನೇ ಸ್ವತಂತ್ರನಾಗಿ ಕ್ರಿ.ಶ 1518 ರಿಂದ ಕುತ್ಬ್‍ಷಾಹಿ ರಾಜ್ಯ ಸ್ಥಾಪನೆ ಮಾಡಿದ. ಗೋಲ್ಕೊಂಡ ಇವನ ರಾಜಧಾನಿ. ಇದು ತೆಲಂಗಾಣದ ಎಲ್ಲ ಭಾಗಗಳನ್ನು ಒಳಗೊಂಡಿದ್ದಿತು. ಕ್ರಿ.ಶ 1687ರಲ್ಲಿ ಔರಂಗಜೇಬ ಗೋಲ್ಕೊಂಡಾಕ್ಕೆ ಮುತ್ತಿಗೆ ಹಾಕಿ ದೊರೆಯಾದ ಅಬುಲ್ ಹಸನ್‍ನನ್ನು ಕೊಲ್ಲಿಸಿದ. ಇದರಿಂದ ಆಂಧ್ರದೇಶ ಮೊಗಲ್ ಆಳ್ವಿಕೆಗೆ ಒಳಪಟ್ಟಿತು. ಈ ಪ್ರಾಂತ್ಯವನ್ನು ನೋಡಿಕೊಳ್ಳುವುದಕ್ಕಾಗಿ ಮೊಗಲರು ಅಸಫ್ ಝಾ ಎಂಬುವನನ್ನು ಪ್ರಾಂತಾಧಿಕಾರಿಯಾಗಿ ನಿಯಮಿಸಿ ನಿಜಾಮ-ಉಲ್-ಮುಲ್ಕ್ ಎಂಬ ಬಿರುದನ್ನು ಕೊಟ್ಟರು. ಇವನ ವಂಶದಲ್ಲಿ ನಾಸಿರ್ ಜಂಗ್, ಮುಸಾಫರ್ ಜಂಗ ಮತ್ತು ನಿಜಾಮ ಅಲಿ ಎಂಬ ರಾಜರು ಆಳಿದರು.
ಹದಿನೇಳನೆಯ ಶತಮಾನದಿಂದ ಡಚ್ಚರು, ಫ್ರೆಂಚರು ಮತ್ತು ಬ್ರಿಟಿಷರು ಆಂಧ್ರದ ಕರಾವಳಿ ಪ್ರದೇಶಗಳಲ್ಲಿ ವ್ಯಾಪಾರದ ಸೋಗಿನಿಂದ ಕೋಟೆಗಳನ್ನು ಕಟ್ಟಿದರು. ನಿಜಾಮನ ಒಲವು ಕಡಿಮೆಯಾದ ಮೇಲೆ ಅವರು ಅವನಿಂದ ಕೆಲವು ಸರ್ಕಾರ್ ಜಿಲ್ಲೆಗಳನ್ನು ಬಳುವಳಿಯಾಗಿ ಪಡೆದು ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆಗೆ ಕಾರಣರಾದರು. ಮಚಲಿಪಟ್ಟಣ, ಕೊಂಡವೀಡು, ವಿಶಾಖಪಟ್ಟಣ, ಶ್ರೀಕಾಳ, ಗುಂಟೂರು, ರಾಜಮಹೇಂದ್ರಿ ಮುಂತಾದ ಮುಖ್ಯ ರೇವುಪಟ್ಟಣಗಳು ಬ್ರಿಟಿಷರ ವಶವಾದವು. ವಿಜಯನಗರ, ಗುಂಟೂರು, ಮುಂತಾದ ಕಡೆಗಳಲ್ಲಿ ಬ್ರಿಟಿಷರು ಜಮೀನ್‍ದಾರರನ್ನು ಪ್ರೋತ್ಸಾಹಿಸಿ, ಅವರನ್ನು ತಮ್ಮ ಸ್ವಾಧೀನ ಮಾಡಿಕೊಂಡಿದ್ದರು. ಹೀಗಾಗಿ ಈಸ್ಟ ಇಂಡಿಯಾ ಕಂಪನಿ ಆಂಧ್ರ ದೇಶದ ರಾಜ್ಯಭಾರದಲ್ಲಿ ವಿಶೇಷ ಆಸಕ್ತಿ ವಹಿಸಿ ಜನಾನುರಾಗಿ ಕಾರ್ಯಗಳನ್ನು ಕೈಗೊಂಡಿತು.

ಆಂಧ್ರರು ಭಾರತದ ಸ್ವಾತಂತ್ರ್ಯ ಸಮರದ ಕರೆಗೆ ಓಗೊಟ್ಟು ಒಂದುಗೂಡಿದರು. ವೀರೇಶಲಿಂಗ ಅವರ ಬರವಣಿಗೆ ಅದಕ್ಕೆ ಸಾಕಷ್ಟು ಪ್ರೋತ್ಸಾಹ ಕೊಟ್ಟಿತು. ನ್ಯಾಪತಿ ಸುಬ್ಬರಾವ್, ರಂಗಯ್ಯನಾಯ್ಡು, ರಮೇಶಂ, ಕೆ.ವಿ.ರೆಡ್ಡಿ, ಮಾಚರ್ಲ ರಾಮಚಂದ್ರ ರಾವ್, ಮುಂತಾದವರು ಆಂಧ್ರದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆ ಬೇರೂರುವಂತೆ ಮಾಡಿದರು. 1918ರಲ್ಲಿ ಆಂಧ್ರದ ಪ್ರದೇಶ ಕಾಂಗ್ರೆಸ್ ಸಮಿತಿ ಸ್ಥಾಪಿತವಾಯಿತು. ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಪ್ರಕಾಶಂ, ವೆಂಕಟಪ್ಪಯ್ಯ, ಪಟ್ಟಾಭಿ ಸೀತರಾಮಯ್ಯ, ಸಾಂಬಮೂರ್ತಿ, ದೇಶೋದ್ದಾರಕ ನಗೇಶ್ವರರಾವ್ ಮುಂತಾದವರು ಭಾಗವಹಿಸಿದರು. ಭಾರತ ಸ್ವಾತಂತ್ರವಾದ ಮೇಲೆ ಆಂಧ್ರ ಮದ್ರಾಸ್ ಪ್ರಾಂತದಲ್ಲಿ ಸೇರಿಹೋಗಿತ್ತು. ಆಂಧ್ರಪ್ರಾಂತ್ಯ ರಚನೆಗೋಸ್ಕರ ಪೊಟ್ಟಿ ಶೀರಾಮುಲು ಉಪವಾಸ ಸತ್ಯಾಗ್ರಹವನ್ನು 2ನೇ ಅಕ್ಟೋಬರ್ 1952, 1 ರಂದು ಕರ್ನೂಲಿನಲ್ಲಿ ಆಂಧ್ರಪ್ರದೇಶದ ಆರಂಭೋತ್ಸವವನ್ನು ಮಾಡಿದರು. ಈ ಮಧ್ಯದಲ್ಲಿ ತೆಲಂಗಾಣ ರಾಜ್ಯ ಸ್ವತಂತ್ರ್ಯವಾಗದೇ ನಿಜಾಮರ ಆಳ್ವಿಕೆಗೆ ಸೇರಿತ್ತು. ನಿಜಾಮರು ಸ್ವಾತಂತ್ರ್ಯವನ್ನು ಕೊಡಲು ನಿರಾಕರಿಸಿದುದರಿಂದ, ಭಾರತ ಸರ್ಕಾರ 1948ರಲ್ಲಿ ಪೊಲೀಸ್ ಕಾರ್ಯಾಚರಣೆಯಿಂದ ಹೈದರಾಬಾದ್ ನಗರವನ್ನು ಮತ್ತು ತೆಲಂಗಾಣ ಜಿಲ್ಲೆಗಳನ್ನು ತನ್ನ ವಶಮಾಡಿಕೊಂಡಿತು. 1956ರ ನವೆಂಬರ್ ಒಂದನೆಯ ತಾರೀಖು ಪ್ರಧಾನಿ ನೆಹರೂ ಆಂಧ್ರಪ್ರದೇಶ ಎಂಬ ಪ್ರಾಂತ್ಯವನ್ನು ಆರಂಭಗೊಳಿಸಿದರು. ಈ ಪ್ರಾಂತ್ಯದಲ್ಲಿ ತೆಲಂಗಾಣ, ಆಂಧ್ರ ಜಿಲ್ಲೆಗಳು, ರಾಯಲ ಸೀಮೆ ಮುಂತಾದ ಎಲ್ಲಭಾಗಗಳೂ ಸೇರಿ, ತೆಲಗುಭಾಷೆ ಮಾತನಾಡುವ ಜನ ಒಂದಾದರು. ಪರಂಪರೆಯಿಂದ ಬಂದ ಆಂಧ್ರ ಎಂಬ ಹೆಸರು ಮುಂದುವರೆದು ಅದು ಆಂಧ್ರಪ್ರದೇಶವಾಯಿತು. 

ಆಂಧ್ರರ ನಾಣ್ಯಗಳು: ದಕ್ಷಿಣಾಪಥದಲ್ಲಿ ಆಳಿದ ಯಾವ ರಾಜ ಮನೆತನದವರೂ ಆಂಧ್ರರಷ್ಟು ವೈವಿಧ್ಯಪೂರ್ಣ ನಾಣ್ಯಗಳನ್ನು ಅಚ್ಚು ಹಾಕಿಸಲಿಲ್ಲ. ಅಷ್ಟೇ ಅಲ್ಲದೆ ಆಂಧ್ರರ ನಾಣ್ಯಗಳು ಬಹಳ ಹೇರಳವಾಗಿಯೂ ದೊರೆತಿವೆ. ಸಾಮಾನ್ಯವಾಗಿ ಇವರ ನಾಣ್ಯಗಳಲ್ಲಿ ವಿದೇಶಿ ನಾಣ್ಯ ಶೈಲಿಯ ಪ್ರಭಾವ ಕಾಣಬರುವುದಿಲ್ಲವಲ್ಲದೆ ಅವು ಅಂಥ ಕಲಾತ್ಮಕವಾಗಿಯೂ ಇಲ್ಲ. ಇವರು ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಅಚ್ಚು ಹಾಕಿಸಿದರೂ ಸೀಸದ ನಾಣ್ಯಗಳೇ ಬಹು ವಿಶೇಷ. ಸಿಂಹ, ಹುಲಿ, ಆನೆ, ಬಿಲ್ಲುಬಾಣ, ಮುಂತಾದ ಚಿಹ್ನೆಗಳೂ ಶಾಸನಗಳೂ ಇವರ ನಾಣ್ಯಗಳಲ್ಲಿರುವದು ಸಾಮಾನ್ಯ. 

ಯಾವ ಶಾತವಾಹನ ರಾಜ (ಆಂಧ್ರ) ನಾಣ್ಯಗಳನ್ನು ಮೊಟ್ಟ ಮೊದಲನೆಯದಾಗಿ ಅಚ್ಚು ಹಾಕಿಸಿದ ಎಂದು ಹೇಳುವದು ಕಷ್ಟ. ಸಿರಿ ಸಾತಕರ್ಣಿ ಎಂಬ ಮೂರನೆಯ ರಾಜನದೇ ಈಗ ದೊರಕಿರುವ ಪ್ರಾಚೀನತಮ ಆಂಧ್ರ ನಾಣ್ಯವೆಂದು ಮಾತ್ರ ಹೇಳಬಹುದು. ಅವರ ವಿವಿಧ ನಮೂನೆಯ ನಾಣ್ಯಗಳು ಹೀಗಿವೆ. ಸದವಾಹನ ಎಂಬ ಶಾಸನವುಳ್ಳ ತಾಮ್ರದ ಚೌಕಾಕಾರದ, ಸೀಸದ ವೃತ್ತಾಕಾರದ ನಾಣ್ಯಗಳಲ್ಲಿ ಸೊಂಡಿಲನ್ನು ಮೇಲೆತ್ತಿರುವ ಆನೆ, ಉಜ್ಜಯಿನಿ ಮತ್ತು ಮನುಷ್ಯನ ಚಿಹ್ನೆಗಳಿವೆ. ಪುರಾಣಗಳ ಪ್ರಕಾರ ಮೂರನೆಯ ಶಾತವಾಹನ ದೊರೆಯಾದ ಶಾತಕರ್ಣಿಯ ನಾಣ್ಯಗಳು ಇವು ಎಂದು ಹೇಳಬಹುದು. ಸಿರಿ ಸತಸ ಎಂಬ ಶಾಸನವುಳ್ಳ ನಾಣ್ಯಗಳು ಕೆಲವು ಆನೆಯ ಮತ್ತೆ ಕೆಲವು ಮನುಷ್ಯನ ಚಿತ್ರವನ್ನು ಹೊಂದಿವೆ. ಸಾತಕರ್ಣಿ ಎಂಬ ಶಾಸನವುಳ್ಳ ನಾಣ್ಯಗಳಲ್ಲಿ ಆನೆ, ಸಿಂಹ, ಮನುಷ್ಯ, ವೃಷಭ ಮುಂತಾದ ಚಿತ್ರಗಳೂ ಉಜ್ಜಯಿನಿ, ಪರ್ವತ ಮುಂತಾದ ಚಿಹ್ನೆಗಳೂ ಇವೆ. ಅಪೀಲಕ ಮತ್ತು ಮೇಘಸ್ವಾತಿ ಎಂಬ ರಾಜರ ನಾಣ್ಯಗಳು ಮಧ್ಯಪ್ರದೇಶದಲ್ಲಿ ದೊರಕಿವೆ.

ಶಾತವಾಹನರಲ್ಲಿ ಮುಖ್ಯವಾದ ಗೌತಮಿಪುತ್ರ ಶಾತಕರ್ಣಿ ಅನೇಕ ವಿಧದ ನಾಣ್ಯಗಳನ್ನು ಬಳಕೆಗೆ ತಂದ. ಇವನು ನಹಪಾಣ ಎಂಬ ರಾಜನನ್ನು ಸೋಲಿಸಿ, ಅವನ ಬೆಳ್ಳಿಯ ನಾಣ್ಯಗಳ ಮೇಲೆ ತನ್ನ ಹೆಸರನ್ನೂ ಮತ್ತು ಕೆಲವು ಚಿಹ್ನೆಗಳನ್ನು ಪುನರ್ಮುದ್ರಿಸಿದ. ಇಂಥ ಸುಮಾರು 13,250 ನಾಣ್ಯಗಳನ್ನು ಜೋಗಲ್ ತಂಬಿ (ನಾಸಿಕದ ಸಮೀಪ) ಎಂಬಲ್ಲಿ ದೊರಕಿವೆ. ಇವನೇ ಬಳಕೆಗೆ ತಂದ ಬೆಳ್ಳಿಯ ನಾಣ್ಯಗಳಲ್ಲಿ ಬ್ರಾಹ್ಮೀಲಿಪಿಯ ರಾಞÉೂೀಗೋತಮೀ ಎಂಬ ಶಾಸನವೂ ಉಜ್ಜಯಿನಿ ಚಹ್ನೆಯೂ ಇವೆ. ಇವನ ಮಗ ವಾಸಿಷ್ಠೀಪುತ್ರ ಪುಲಮಾವಿಯ ನಾಣ್ಯಗಳಲ್ಲಿ ರಾಜನ ಚಿತ್ರವೂ ಪುಲಮಾವಿ ಎಂಬ ಶಾಸನವೂ ಉಜ್ಜಯಿನಿ, ಚೈತ್ಯ, ಆನೆ ಮುಂತಾದವು ಇವೆ. ಪುರಾಣಗಳ ಮಾಹಿತಿಯ ಪ್ರಕಾರ ಈ ರಾಜನ ಅನಂತರ ಆಳಿದ ವಾಸಿಷ್ಠೀಪುತ್ರ ಶಿವಶ್ರೀ ಎಂಬ ರಾಜನ ನಾಣ್ಯಗಳು ಆಂಧ್ರದಲ್ಲಿ ದೊರಕಿವೆ. ಯಜ್ಞಶ್ರೀ ಶಾತಕರ್ಣಿಯ ನಾಣ್ಯಗಳಲ್ಲಿ ಸಾಮಾನ್ಯವಾಗಿ ಆನೆ, ಕುದುರೆ, ಪರ್ವತ, ಉಜ್ಜಯಿನಿ ಮುಂತಾದವುಗಳಿರುತ್ತವೆ. ಇವನ ಕೆಲವು ನಾಣ್ಯಗಳಲ್ಲಿ ಹಡಗಿನ ಚಿತ್ರವಿದೆ. ಈ ನಾಣ್ಯಗಳು ಕೋರಮಂಡಲ ತೀರದಲ್ಲೂ ಗುಂಟೂರಿನಲ್ಲೂ ದೊರಕಿವೆ. ಇವುಗಳಲ್ಲಿ ರಾಜರ ಚಿತ್ರ, ಬ್ರಾಹ್ಮೀಲಿಪಿಯಲ್ಲಿ ರಾಣೊ ಗೋತಮೀಪುತಸ ಸಿರಿ ಯಞ ಸಾತಕನಿಸ ಎಂಬ ಶಾಸನ, ಹಿಂಭಾಗದಲ್ಲಿ ಉಜ್ಜಯಿನಿ ಚಿಹ್ನೆ, ನದಿ, ಸೂರ್ಯ, ಮುಂತಾದವುಗಳು ಇವೆ.
ಪುರಾಣ ಗ್ರಂಥಗಳ ಪ್ರಕಾರ ಯಜ್ಞಶ್ರೀ ಶಾತಕರ್ಣಿಯ ಅನಂತರ ಆಳಿದ ವಿಜಯ ಮತ್ತು ಚಂದ್ರಶ್ರೀ ಶಾತಕರ್ಣಿಗಳ ನಾಣ್ಯಗಳು ತರ್ಹಲ ಎಂಬಲ್ಲಿ ದೊರಕಿವೆ. ಇವುಗಳಲ್ಲಿ ಅವರ ಹೆಸರುಗಳೂ ಆನೆ ಮತ್ತಿತರ ಉಜ್ಜಯಿನಿ ಚಿಹ್ನೆಗಳೂ ಇವೆ. ಇದೇ ಸ್ಥಳದಲ್ಲಿ ದೊರಕಿರುವ ನಾಣ್ಯಗಳಲ್ಲಿ ಪುಲಹಮಾವಿ ಎಂಬ ಶಾಸನವುಳ್ಳ ನಾಣ್ಯಗಳು ಮೂರನೆಯ ಪುರಮಾವಿಯ ನಾಣ್ಯಗಳೆಂದು ಹೇಳಬಹುದು.

ಪುರಾಣಗಳಲ್ಲಿ ಉಲ್ಲೇಖಿತವಾಗದೇ ಇರುವ ಅನೇಕ ಶಾತವಾಹನರ ನಾಣ್ಯಗಳು ದೊರಕಿವೆ. ಈ ಗುಂಪಿನಲ್ಲಿ ಕುಂಭಶಾತಕರ್ಣಿ, ಶಕಶಾತಕರ್ಣಿ, ಕರ್ಣಶಾತಕರ್ಣಿ, ಕೋಸಕೀಪುತ್ರಶಾತಕರ್ಣಿ ಮುಂತಾದ ರಾಜರ ನಾಣ್ಯಗಳು ಗಮನಾರ್ಹವಾದುವು. ಇವು ಶಾತವಾಹನ ನಾಣ್ಯಗಳೆಂದು ಶಾತಕರ್ಣಿ ಎಂಬ ಹೆಸರಿನಿಂದ ಮಾತ್ರ ಹೇಳಬಹುದಾಗಿದೆ. ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿಯ ಅಗೆತದಲ್ಲಿ ವಾಸಿಷ್ಠೀಪುತ್ರ ಪುಲಮಾವಿಯ ಮತ್ತು ಶಾತವಾಹನರ ಅಧೀನದಲ್ಲಿ ಆಳುತ್ತಿದ್ದ ರಾಜರ ಅನೇಕ ನಾಣ್ಯಗಳೂ ದೊರಕಿವೆ. 
(ಎ.ವಿ.ಎಸ್.)

ಆಂಧ್ರದ ಪ್ರಾಗಿತಿಹಾಸ: ಗೋದಾವರಿ, ಕೃಷ್ಣಾ, ತುಂಗಭದ್ರ ಮತ್ತು ಉಪನದಿಗಳ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಪೂರ್ವಶಿಲಾಯುಗದ ಮಾನವ ನಿರ್ಮಿತ ಕಲ್ಲಿನಾಯುಧಗಳು ದೊರಕಿವೆ. ಕರ್ನೂಲು, ಗುಂಟೂರು ಅದರಲ್ಲೂ ನಾಗಾರ್ಜುನಕೊಂಡ, ನೆಲ್ಲೂರು ಮುಂತಾದ ಪ್ರದೇಶಗಳಲ್ಲಿ ಪೂರ್ವ ಶಿಲಾಯುಗದ ಕೈಗೊಡಲಿಗಳು, ಚಕ್ಕೆ ಕಲ್ಲಿನಾಯುಧಗಳೂ ಹೇರಳವಾಗಿ ದೊರಕಿ, ಅತ್ಯಂತ ಪುರಾತನ ಕಾಲದಿಂದಲೂ ಇಲ್ಲಿ ಮಾನವ ಆಹಾರ ಸಂಗ್ರಹಣೆ ಮಾಡಿಕೊಂಡು ವಾಸಿಸುತ್ತಿದ್ದನೆಂಬುದಕ್ಕೆ ಸಾಕ್ಷ್ಯವನ್ನೊದಗಿಸುತ್ತದೆ. ಈ ಪ್ರದೇಶಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಉಂಡೆ ಕಲ್ಲಿನಾಯುಧಗಳು ದೊರಕುವದರಿಂದ ಕೈಗೊಡಲಿಗಳ ಸಂಸ್ಕøತಿಗಿಂತಲೂ ಪ್ರಾಚೀನವಾದ ಒಂದು ಸಂಸ್ಕøತಿ ಇಲ್ಲಿತ್ತೆಂದು ಹಲವರು ಅಭಿಪ್ರಾಯ ಪಟ್ಟರೂ ಅದು ಕೈಗೊಡಲಿ ಸಂಸ್ಕøತಿಯ ಅಂಗವೆಂದೇ ಹೇಳಬೇಕಾಗುತ್ತದೆ. 

ಮಧ್ಯಶಿಲಾಯುಗದಲ್ಲಿ ಸಣ್ಣ ಚಕ್ಕೆಕಲ್ಲಿನಾಯುಧಗಳ ಹೊಸ ಸಂಸ್ಕøತಿಯೊಂದು ಭಾರತದಲ್ಲಿ ತಲೆದೋರಿತು. ಆ ಕಾಲದ ಅವಶೇಷಗಳು ಗುಂಟೂರು, ಕರ್ನೂಲು, ಚಿತ್ತೂರು ಮತ್ತು ಅನಂತಪುರ ಮುಂತಾದ ಕಡೆ ದೊರಕಿ ಮಾನವ ಸಂಸ್ಕøತಿಯ ಮುನ್ನಡೆಯನ್ನೂ ರೂಪಿಸುತ್ತವೆ. ಆ ಸಂಸ್ಕøತಿಯಲ್ಲಿ ಒರೆಯುವ ಆಯುಧಗಳು ಕೊರೆಯುವ ಆಯುಧಗಳು, ಮೊನಚಾದ ಶಿಲೆಗಳ ಆಯುಧಗಳು ಹೆಚ್ಚು ಬಳಕೆಯಲ್ಲಿದ್ದವು. ಆನಂತರ ಸೂಕ್ಮಶಿಲಾಯುಧ ಸಂಸ್ಕøತಿಯ ಅವಶೇಷಗಳು ಕರ್ನೂಲು, ಗಿಡ್ಡಲೂರು, ನಾಗಾರ್ಜುನಕೊಂಡ ಮೊದಲಾದ ಅನೇಕ ಪ್ರದೇಶಗಳಲ್ಲಿ ದೊರಕಿವೆ. ಈ ಹಂತವನ್ನು ಕ್ರಿ.ಪೂ.6-3 ಸಾವಿರ ವರ್ಷಗಳಷ್ಟು ಹಿಂದಿನ ಸೂಕ್ಷ್ಮಶಿಲಾಯುಧಗಳೆಂದೂ ತಾಮ ಶಿಲಾಯುಗಕ್ಕೆ ಸೇರುವ ಫಲಕಗಳೆಂದೂ ವಿಭಾಗಿಸಬಹುದು. ನೇರವಾದ ಫಲಕಗಳು ಅರ್ಧಚಂದ್ರ ಮತ್ತು ಮುಕ್ಕೋಣಾ ಕೃತಿ ಆಯುಧಗಳು, ಒರೆಯುವ ಮತ್ತು ಕೊರೆಯುವ ಉಪಕರಣಗಳು ಮತ್ತು ಒಂದು ಪಕ್ಕವನ್ನು ಮೊಂಡು ಮಾಡಿದ ಫಲಕಗಳು-ಈ ಕಾಲದ ಮುಖ್ಯ ಆಯುಧಗಳು.

ನವ ಶಿಲಾಯುಗದ ಆಹಾರೋತ್ಪಾದನೆಯ ಹಂತದ ಅವಶೇಷಗಳು ಅನೇಕ ಪ್ರದೇಶಗಳಲ್ಲಿ ದೊರಕಿವೆ. ಗುಂಟೂರು, ನೆಲ್ಲೂರು, ಕಡಪ ಹಾಗೂ ಅನಂತಪುರ ಜಿಲ್ಲೆಗಳಲ್ಲಿ ನಯಮಾಡಿದ ಕೊಡಲಿಗಳೂ ನಾಚಿಗಳೂ ಮಡಿಕೆ ಕುಡಿಕೆಗಳೂ ದೊರಕಿರುವುದಲ್ಲದೆ ದನಕರುಗಳ ಸಗಣಿಗಳನ್ನು ಸುಟ್ಟಿದುದರಿಂದ ಉಂಟಾದ ಬೂದಿಯ ದಿಬ್ಬಗಳು ಉತ್ನೂರು ಮುಂತಾದ ಅನೇಕ ಕಡೆಗಳಲ್ಲಿ ಕಂಡುಬಂದು ಈ ಜನರ ಪಶುಸಂಗೋಪನ ವೃತ್ತಿಯ ದ್ಯೋತಕವಾಗಿವೆ. ಆಗ ರೂಢಮೂಲವಾದ ವ್ಯವಸಾಯ ಪದ್ಧತಿ ಬಳಕೆಯಲ್ಲಿತ್ತು. ಮುಂದಿನ ತಾಮ್ರಶಿಲಾಯುಗದ ಮಾಹಿತಿಗಳು ಅಲ್ಲಲ್ಲಿ ಕಂಡುಬಂದಿದ್ದರೂ ಅವುಗಳ ವಿಷಯವಾಗಿ ಸ್ಪಷ್ಟವಾಗಿ ಏನೂ ಹೇಳಲಾಗಿಲ್ಲ. ಕಬ್ಬಿಣಯುಗಕ್ಕೆ ಸೇರಿದ ಬೃಹತ್ ಶಿಲಾಸಮಾಧಿ ಸಂಸ್ಕøತಿಯ ಅವಶೇಷಗಳು ಗೋದಾವರಿ ನದಿಯ ದಕ್ಷಿಣದಲ್ಲಿ ಸಾಮಾನ್ಯವಾಗಿ ಎಲ್ಲೆಡೆಗಳಲ್ಲೂ ಮುಖ್ಯವಾಗಿ ಹೈದರಾಬಾದ ಪ್ರದೇಶ, ಗುಂಟೂರು, ಕಡಪ, ಕರ್ನೂಲು, ಅನಂತಪುರ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡು ಬಂದಿದೆ. ಈ ಕಾಲದಲ್ಲಿ ಮಾನವ ವ್ಯವಸಾಯ ರೀತಿಯನ್ನು ಉತ್ತಮಗೊಳಿಸಿ, ಕಬ್ಬಿಣದ ಉಪಕರಣಗಳನ್ನು ಉಪಯೋಗಿಸುತ್ತಿದ್ದ. ನಗರೀಕರಣ ಪ್ರಾರಂಭವಾಗಿ ಐತಿಹಾಸಿಕ ತಳಹದಿ ಸ್ಥಾಪಿತವಾಯಿತು.
 							       				              
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ